– ಭಾವನ ಕೊಲ್ಲಲು ಭಾಮೈದನ ಸಪೋರ್ಟ್
– ಮೈಸೂರಿನ ಖಾಕಿ ಮುಂದೆ ಸತ್ಯ ಬಿಚ್ಚಿಟ್ಟ ಜೋಡಿಹಕ್ಕಿ
ಮೈಸೂರು: ಅಪ್ಪ-ಮಗನ ಮೇಲಿನ ಮಾರಣಾಂತಿಕ ಹಲ್ಲೆ ನಡೆಸಲು ಸುಪಾರಿ ಕೊಟ್ಟಿದ್ದ ಸುಂದರಿ ಮೋನಿಶಾ ಸೇರಿ ನಾಲ್ವರು ಆರೋಪಿಗಳನ್ನು ನರಸಿಂಹರಾಜ ಪೊಲೀಸರು ಬಂಧಿಸಿದ್ದಾರೆ.
ಮುಖ್ತಾರ್ ಮತ್ತು ಅವರ ಪುತ್ರ ಮೊಹಿನ್ ಅಹಮದ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಮೊನೀಶಾ, ರಾಘವೇಂದ್ರ, ಗೌತಮ್ ಜೊತೆ ಕೊಲ್ಲಲು ಸುಪಾರಿ ಕೊಟ್ಟ ಬಾಮೈದ ಸಿರಾಜ್‍ನನ್ನು ಪೊಲೀಸರು ಬಂಧಿಸಿದ್ದಾರೆ.
ಏನಿದು ಪ್ರಕರಣ?
ಬೆಂಗಳೂರಿನಲ್ಲಿ ಗಗನಸಖಿ ತರಬೇತಿ ಪಡೆಯುತ್ತಿರುವ ಮೈಸೂರಿನ ಚಾಮರಾಜಪುರಂ ನಿವಾಸಿ ಮೋನಿಶಾ(21), ಹಲ್ಲೆಗೆ ಒಳಗಾದ ಮೊಹಿನ್ ಅಹಮದ್ ಅವರ ಭಾವಮೈದಾ ಸಿರಾಜ್ ನನ್ನು ಪ್ರೀತಿಸುತ್ತಿದ್ದಳು. ಈ ಪ್ರೀತಿಗೆ ಮನೆಯವರ ವಿರೋಧವಿತ್ತು. ಮೊಹಿನ್, ಮೋನಿಷಾಗೆ ತನ್ನ ಭಾವಮೈದನನ್ನು ಪ್ರೀತಿಸಬೇಡ ಅಂತಾ ಹೇಳಿದ್ದರು. ಅಷ್ಟೇ ಅಲ್ಲದೇ ಮೋನಿಶಾಳನ್ನು ಕರೆದು ಮೋಹಿನ್ ಕುಟುಂಬ ಬುದ್ಧಿವಾದ ಹೇಳಿತ್ತು.
ಈ ಬುದ್ಧಿವಾದಕ್ಕೆ ಜಗದೇ ಕೋಪಗೊಂಡ ಮೋನಿಶಾ ಫೋನಿನಲ್ಲಿ ಧಮ್ಕಿ ಹಾಕಿ ಮೋಹಿನ್ ಕುಟುಂಬದವರ ಮೇಲೆ ಹಲ್ಲೆ ನಡೆಸಲು ಮಂಡ್ಯದ ರಾಘವೇಂದ್ರ, ಗೌತಮ್‍ಗೆ ಸುಪಾರಿ ನೀಡಿದ್ದಾಳೆ. ಈ ಕೃತ್ಯಕ್ಕೆ ಸ್ನೇಹಿತ ಸಿರಾಜ್ ಸಾಥ್ ನೀಡಿದ್ದಾನೆ. ಅದರಂತೆ ಅಕ್ಟೋಬರ್ 24ರಂದು ಮಧ್ಯರಾತ್ರಿ ಮೈಸೂರಿನ ಎನ್.ಆರ್. ಮೊಹಲ್ಲಾದ ಶಿವಾಜಿ ರಸ್ತೆಯ ಮನೆಗೆ ನುಗ್ಗಿ ಎಲೆಕ್ಟ್ರಿಕಲ್ ಗುತ್ತಿಗೆದಾರ ಮುಖ್ತಾರ್ ಮತ್ತು ಅವರ ಪುತ್ರ ಮೊಹಿನ್ ಅಹಮದ್ ಮೇಲೆ ಇವರಿಬ್ಬರು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು.
ಸಿಕ್ಕಿ ಬಿದ್ದಿದ್ದು ಹೇಗೆ?
ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಬಳಿಕ ಮುಖ್ತಾರ್ ಕುಟುಂಬದ ಸದಸ್ಯರು ಮೋನಿಶಾಳ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಈ ಅನುಮಾನದ ಆಧಾರದಲ್ಲಿ ಮೋನಿಶಾಳನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆಕೆಯ ಮೊಬೈಲ್ ಕರೆ ಪರಿಶೀಲಿಸಿ ಪ್ರಶ್ನಿಸಿದ್ದಾಗ ಈ ಪ್ರಕರಣದ ಸಂಪೂರ್ಣ ಮಾಹಿತಿ ಬೆಳಕಿಗೆ ಬಂದಿದೆ.